ಚೀನೊಪೋಡಿಯೇಸೀ  -
 	ಚಕ್ಕೋತಸೊಪ್ಪಿನ ಗಿಡದ ಕುಟುಂಬ. ಸೆಂಟ್ರಾಸ್ಪರ್ಮೆ ಗಣಕ್ಕೆ ಸೇರಿದೆ. ಇದರಲ್ಲಿ 75 ಜಾತಿಗಳು 500 ಪ್ರಭೇದಗಳು ಇವೆ. ಈ ಕುಟುಂಬಕ್ಕೆ ಸೇರಿದ ಕೆಲವು ಸಸ್ಯಗಳಲ್ಲಿ ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳ (ಜೀರೋಫೈಟ್ಸ್) ಲಕ್ಷಣಗಳನ್ನು ಕಾಣುತ್ತೇವೆ. ಏಕೆಂದರೆ ಇವು ಲವಣಮಿಶ್ರಿತ ನೀರಿರುವ ಸಮುದ್ರ ತೀರಗಳಲ್ಲಿ ಬೆಳೆಯುತ್ತವೆ. ಸಮುದ್ರ ತೀರದ ಮಣ್ಣಿನಲ್ಲಿ ಲವಣದ ಅಂಶ ಅಧಿಕವಾಗಿರುವುದರಿಂದ ಸಸ್ಯಗಳು ಸಾಕಷ್ಟು ನೀರನ್ನು ಹೀರಿಕೊಳ್ಳಲಾರವು. ಹೀಗಾಗಿ ಈ ಪರಿಸ್ಥಿತಿಯಲ್ಲಿ ಬೆಳೆಯುವ ಸಸ್ಯಗಳಲ್ಲಿ ಬಾಷ್ಪವಿಸರ್ಜನಾ ಕ್ರಿಯೆ (ಟ್ರಾನ್‍ಪಿರೇಷನ್) ಅನಿವಾರ್ಯವಾಗಿ ಅತ್ಯಲ್ಪ ಪ್ರಮಾಣದಲ್ಲಿ ನಡೆಯಬೇಕು. ಇದಕ್ಕಾಗಿ ಇವುಗಳ ದೇಹದಲ್ಲಿ ಕೆಲವು ವಿಶಿಷ್ಟ ಪರಿವರ್ತನೆಗಳನ್ನು ಕಾಣಬಹುದು. ಈ ಸಸ್ಯಗಳು ಸಾಮಾನ್ಯವಾಗಿ ಪುಟ್ಟಗಿಡಗಳ ರೂಪದಲ್ಲೂ ಪೊದೆಗಳ ರೂಪದಲ್ಲೂ ಚಿಕ್ಕಮರಗಳ ರೂಪದಲ್ಲೂ ಬೆಳೆಯುತ್ತವೆ. ಚೀನೊಪೋಡಿಯಮ್, ಸ್ಯಾಲಿಕಾರ್ನಿಯ, ಸುಯೇಡ, ಹ್ಯಾಲೊಕ್ಸೈಲಾನ್, ಬೀಟ, ಸ್ಪಿನೇಶಿಯ ಓಲರೇಸಿಯ ಮುಂತಾದ ಜಾತಿಯ ಸಸ್ಯಗಳು ಈ ಕುಟುಂಬಕ್ಕೆ ಸೇರಿವೆ. ಸ್ಪಿನೇಶಿಯ ಓಲರೇಸಿಯ ಸಸ್ಯವನ್ನು ಸಾಮಾನ್ಯವಾಗಿ ಚಕ್ಕೋತಸೊಪ್ಪಿನ ಗಿಡ ಎಂದು ಕರೆಯುತ್ತಾರೆ. ಕೀನೊಪೋಡಿಯೇಸೀ ಕುಟುಂಬದ ಸಸ್ಯಗಳ ಬೇರುಗಳು ಭೂಮಿಯಲ್ಲಿ ಬಹು ಆಳಕ್ಕೆ ಹೋಗಿ ಬೆಳೆಯುತ್ತವೆ. ಎಲೆಗಳು ಚಿಕ್ಕವಾಗಿದ್ದು ವಿವಿಧರೂಪಗಳಲ್ಲಿ ಇರುತ್ತವೆ. ಕೆಲವು ಸಸ್ಯಗಳಲ್ಲಿ ಎಲೆಗಳು ದಪ್ಪನಾಗಿ ರಸಭರಿತವಾಗಿ ಕಾಣುತ್ತವೆ. ಎಲೆಗಳ ಮೇಲೆ ಕೂದಲುಗಳು ಬೆಳೆದಿರುವುದೂ ಉಂಟು. ಕೆಲವು ಸಸ್ಯಗಳಲ್ಲಿ ಎಲೆಗಳೇ ಇಲ್ಲದಿರಬಹುದು. ಕಾಂಡ ಪಾಪಾಸ್‍ಕಳ್ಳಿಯಲ್ಲಿರುವಂತೆ ದಪ್ಪವಾಗಿರಬಹುದು. ಕೆಲವು ಪ್ರಭೇದಗಳಲ್ಲಿ ಕಾಂಡ ಖಂಡಖಂಡಗಳಾಗಿ ವಿಭಾಗವಾಗಿದೆ. ಕಾಂಡವನ್ನು ಕತ್ತರಿಸಿನೋಡಿದಾಗ ಜೀರೊಫೈಟ್ ಸಸ್ಯಗಳ ಗುಣಗಳನ್ನೇ ನೋಡಬಹುದು. ಹೂಗೊಂಚಲುಗಳು ಪ್ರಥಮವಾಗಿ ಅಂತ್ಯಾರಂಭಿ ಮಾದರಿಯಲ್ಲಿ ಜೋಡಣೆಯಾಗಿದ್ದು ಅದರ ಕವಲುಗಳಲ್ಲಿ ಮಧ್ಯಾರಂಭಿ ಜೋಡಣೆ ಇರುತ್ತದೆ. ಹೂಗಳು ಬಹಳ ಚಿಕ್ಕಗಾತ್ರದವು; ಏಕಲಿಂಗ ಅಥವಾ ದ್ವಿಲಿಂಗಿಗಳಾಗಿರಬಹುದು. ಹೂವಿನ ಪೆರಿಯಾಂತ್ ಭಾಗ ಸರಳರೀತಿಯದು. ಕೆಲವೊಮ್ಮೆ ಪೆರಿಯಾಂತ್ ಭಾಗವೇ ಇರುವುದಿಲ್ಲ. ಕೇಸರಗಳ ಸಂಖ್ಯೆ ಪೆರಿಯಾಂತ್ ಸಂಖ್ಯೆಯಷ್ಟೆ ಅಥವಾ ಕಡಿಮೆ. ಅಂಡಾಶಯ ಉಚ್ಚಸ್ಥಾನದ್ದು. ಫಲ ಚಿಕ್ಕದಾಗಿದ್ದು ಅದಕ್ಕೆ ಎಕೀನ್ ಅಥವಾ ನಟ್ ಎಂದು ಹೆಸರಿದೆ.

	ಚೀನೊಪೋಡಿಯಮ್ ಆಲ್ಬಂ ಮತ್ತು ಕೀ. ಆಂಬ್ರಸಾಯ್ಡಿಸ್ ಪ್ರಭೇದಗಳಿಂದ ಒಂದು ಬಗೆಯ ಎಣ್ಣೆಯನ್ನು ತೆಗೆಯುತ್ತಾರೆ. ಕರುಳಿನಲ್ಲಿನ ಪರತಂತ್ರ ಜೀವಿಗಳು, ಕೊಕ್ಕೆಹುಳು, ಜಂತುಹುಳುಗಳ ನಿರ್ಮೂಲನಕ್ಕಾಗಿ ಔಷಧರೂಪದಲ್ಲಿ ಈ ಎಣ್ಣೆಯನ್ನು ಉಪಯೋಗಿಸುತ್ತಾರೆ. ಈ ಕುಟುಂಬಕ್ಕೆ ಸೇರಿದ ಕ್ವಿನೋವ ಎಂಬ ಸಸ್ಯ ದಕ್ಷಿಣ ಅಮೆರಿಕದಲ್ಲಿ ಒಂದು ಆಹಾರ ಬೆಳೆ. ಅದರ ಬೀಜಗಳನ್ನು ಅಕ್ಕಿಯಂತೆ ಆಹಾರವಾಗಿ ಸೇವಿಸುತ್ತಾರೆ. ಅದು ಒಂದು ಮಿಥ್ಯಾಧಾನ್ಯ ಸಸ್ಯ ಎಂತಲೂ ಹೇಳಬಹುದು. ಚಕ್ಕೊತಸೊಪ್ಪನ್ನು (ಸ್ವಿನೇಶಿಯ ಓಲರೇಸಿಯ) ಹಸಿಯಾಗಿಯೊ ಬೇಯಿಸಿಯೊ ಉಪಯೋಗಿಸುತ್ತಾರೆ. ಇದರ ಎಲೆ ಮತ್ತು ಬೀಜಗಳು ಔಷಧರೂಪದಲ್ಲಿಯೂ ಉಪಯುಕ್ತ. ಬೀಟ್‍ರೂಟ್ ಎಂಬುದರಿಂದ ವಿವಿಧ ಜಾತಿಯ ಬೀಟಗಡ್ಡೆ ದೊರೆಯುತ್ತವೆ. ಇವನ್ನು ತರಕಾರಿಯಾಗಿ ಬಳಸುವುದು ಹೆಚ್ಚು. ಇದರಲ್ಲಿ ಸಕ್ಕರೆಯ ಅಂಶ ಅಧಿಕವಾಗಿರುವುದರಿಂದ ಐರೋಪ್ಯ ದೇಶಗಳಲ್ಲಿ ಇದರಿಂದ ಸಕ್ಕರೆಯನ್ನು ಉತ್ಪಾದಿಸುತ್ತಾರೆ.		(ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ